ತಳಗಲ್ಲು
	ಮಣ್ಣಿನ ಹೊದಿಕೆಯಿಂದ ಮುಚ್ಚಲ್ಪಟ್ಟ ಗಟ್ಟಿ ಶಿಲೆ (ಬೆಡ್‍ರಾಕ್). ಶಿಥಿಲೀಕರಣಕ್ಕೆ ಒಳಗಾಗದೆ ಮಣ್ಣಿನಲ್ಲಿ ಹೂತುಕೊಂಡಿರುವ ಶಿಲೆ ಎಂದು ಅರ್ಥ ಕೊಡುವ ಗಣಿ ಪದ. ಬಹುತೇಕ ಪ್ರದೇಶಗಳಲ್ಲಿ ತಳಗಲ್ಲು ಭೂಮಿಯ ಆಳದಲ್ಲಿ ಹುದುಗಿದ್ದರೂ ಕೊರೆ ಯಂತ್ರಗಳಿಂದ ಕೊರೆದು ಇದನ್ನು ತಲಪಲು ಸಾಧ್ಯ. ತಳಗಲ್ಲನ್ನು ಮುಚ್ಚಿರುವ ಜೇಡಿ, ಮರಳು, ಇತರ ಮಣ್ಣಿನ ಕಣಸಂಗ್ರಹ ಕೆಲವು ಸೆಂಟಿಮೀಟರುಗಳಿಂದ ತೊಡಗಿ ನೂರಾರು ಮೀಟರುಗಳಷ್ಟು ದಪ್ಪವಾಗಿರಬಹುದು. ವಾಸ್ತವವಾಗಿ ದಪ್ಪ ಕಣಗಳು, ಭೂಮಿಯ ಶಿಲೆಗಳಿಂದ ಅಥವಾ ಖನಿಜಗಳಿಂದ ಉಂಟಾದವು. ತಳಗಲ್ಲಿನ ಮೇಲ್ಭಾಗದ ಈ ವಲಯಕ್ಕೆ ಪ್ರಾವಾರ (ಮ್ಯಾಂಟಲ್) ಎಂದು ಹೆಸರು. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಇದರಲ್ಲಿನ ಖನಿಜ ಹಾಗೂ ಇತರ ಶಿಲಾಚೂರುಗಳು ತಳಗಲ್ಲಿನಿಂದ ಉಂಟಾದವೆಂದು ಸ್ಪಷ್ಟವಾಗುತ್ತದೆ. ಕೆಲವೊಮ್ಮೆ ತಳಗಲ್ಲು ಶಿಥಿಲೀಕರಣಕ್ಕೆ ಒಳಗಾಗುವುದೇ ಇದಕ್ಕೆ ಕಾರಣ. ಕೆಲವು ಪ್ರದೇಶಗಳಲ್ಲಿ ಪ್ರಾವಾರಸಹಿತವಾದ ಶಿಲಾವಸ್ತುಗಳಿಗೂ ತಳಗಲ್ಲಿನ ಸಂಯೋಜನೆಗೂ ಯಾವ ಸಂಬಂಧವೂ ಕಾಣದೆ ಇರಬಹುದು. ಸಾಗಣಿಗೊಂಡ ವಸ್ತುಗಳು ತಳಗಲ್ಲಿನ ಮೇಲೆ ಸಂಚಯನಗೊಂಡಾಗ ಇಂಥ ಪರಿಸ್ಥಿತಿ ಉದ್ಭವಿಸುತ್ತದೆ. ಇವುಗಳಿಂದ ಉಂಟಾದ ಪ್ರಾವಾರಕ್ಕೆ ಸಾಗಣೆ ಪ್ರಾವಾರ ಎನ್ನುವರು. ಉದಾಹರಣೆಗೆ ಮೆಕ್ಕಲು ಮಣ್ಣು, ಸ್ಥಳಾಂತರಗೊಳ್ಳದೆ ಸ್ವಸ್ಥಳದಲ್ಲಿಯೇ ಇರುವ ಶಿಲಾವಸ್ತುಗಳು ಶೇಷ ಪ್ರಾವಾರ ಎನ್ನಿಸಿಕೊಳ್ಳುತ್ತವೆ. ಉದಾಹರಣೆಗೆ ಶೇಷ ಜೇಡಿ, ಜಂಬುಮಣ್ಣು. ಗಾಳಿ, ನೀರು ಹಾಗೂ ಇತರ ಕರ್ತೃಗಳು ತಳಗಲ್ಲಿನ ಬಿರುಕಿನಲ್ಲಿ ಹಾಯ್ದು ಶಿಥಿಲೀಕರಣ ಉಂಟುಮಾಡುತ್ತವೆ.										(ಟಿ.ಆರ್.ಎ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ